ಚಿತ್ -
ತಾನೂ ಪ್ರಕಾಶಿಸಿ ಇತರ ವಸ್ತುಗಳನ್ನೂ ಪ್ರಕಾಶಿಸುವಂಥ ತೇಜೋಧಾತು ಎನ್ನುವ ಮುಖ್ಯ ಅರ್ಥದಲ್ಲಿ ಚಿತ್ ಶಬ್ದವನ್ನು ತತ್ತ್ವಶಾಸ್ತ್ರದಲ್ಲಿ ಬಳಸಲಾಗುತ್ತದೆ. ಈ ಅರ್ಥವನ್ನು ಸ್ವಲ್ಪ ಸಡಿಲಿಸಿಕೊಂಡೇ ಚಿತ್ ಎಂದರೆ ಮನಸ್ಸು, ಬುದ್ದಿ, ಪ್ರಾಣ, ವಿವೇಕ ಎಂಬ ಅರ್ಥಗಳಲ್ಲೂ ಬಳಸುತ್ತಾರೆ. ಆದರೆ ಇದರ ಮುಖ್ಯ ಅರ್ಥವನ್ನು ಬಿಡದೆ ಉಪಯೋಗಿಸುವುದಾದರೆ ಇದು ಆತ್ಮ ಅಥವಾ ಬ್ರಹ್ಮತತ್ತ್ವ ಎಲ್ಲದಕ್ಕೂ ಮೂಲವೆಂಬಂತೆ ಅಸ್ತಿತ್ವವನ್ನು ಸೂಚಿಸುವ ಹಾಗೆ ತಾನೇ ಚಿದ್ವಸ್ತು ಎಂದೂ ಸೂಚಿಸಿಕೊಳ್ಳುತ್ತದೆ. ಈ ಅರ್ಥದಲ್ಲಿಯೇ ಉಪನಿಷತ್ತುಗಳು ಬ್ರಹ್ಮ ಅಥವಾ ಆತ್ಮತತ್ತ್ವವನ್ನು ಸತ್ ಚಿತ್ ಆನಂದವೆಂತಲೂ ಸತ್ಯಂ ಜ್ಞಾನಂ ಅನಂತಂ ಎಂತಲೂ ನಿರ್ದೇಶಿಸುತ್ತವೆ.

ಪರಮಾರ್ಥ ತತ್ತ್ವವಾದ ಬ್ರಹ್ಮತತ್ತ್ವ ಎಲ್ಲದರ ಇರುವಿಕೆಗೆ ಆಧಾರವಾಗಿದ್ದು ಎಲ್ಲದರ ಇರುವನ್ನೂ ಆಗಗೊಳಿಸುವುದರಿಂದ ಸತ್‍ತತ್ತ್ವ ಎಂದು ಕರೆಯಿಸಿಕೊಳ್ಳುವುದು ಸಹಜ. ಇದು ನಿತ್ಯ, ನಿರಂತರ, ಅಕ್ಷರ ಆಗಿರುವಂಥ ಬ್ರಹ್ಮದ ಲಕ್ಷಣ. ಇಂಥ ಸದ್ವಸ್ತು ಏಕೆ ಜಡಾತ್ಮಕ ಅಥವಾ ಅಚೇತನಾತ್ಮಕವಾಗಿರಬಾರದು-ಎನ್ನುವುದಕ್ಕೆ ಉತ್ತರ ರೂಪದಲ್ಲಿ ಅದು ಚಿದ್ವಸ್ತು ಅಥವಾ ಚೇತನಾತ್ಮಕವಾದದ್ದು ಎಂದು ಉಪನಿಷತ್ತುಗಳು ಸಾರುತ್ತವೆ. ಹೀಗೆ ಬ್ರಹ್ಮತತ್ತ್ವವನ್ನು ಸ್ವಯಂಜ್ಯೋತಿ ಸ್ವಪ್ರಕಾಶ ಎಂದು ನಿರ್ದೇಶಿಸಿವೆ.

ಮೂಲಭೂತವಾಗಿ ಜಡ ಅಥವಾ ಅಚೇತನ ವಸ್ತುವಿನ ಲಕ್ಷಣ ಪರಪ್ರಕಾಶ್ಯವಾದದ್ದು, ಜ್ಞಾನಕ್ಕೆ ವಿಷಯವಾದದ್ದು. ಆದರೆ ಸ್ವಯಂಪ್ರಕಾಶವಾದ, ಸ್ವಯಂಜ್ಯೋತಿಯಾದ ಚಿದ್ವಸ್ತು ಜ್ಞಾತೃ ಸ್ಥಾನದಲ್ಲಿ ಇರುವಂಥದು ಎಂದು ತಿಳಿಸುತ್ತದೆ. ಆದ್ದರಿಂದಲೇ ಇದನ್ನು ಆತ್ಮ ಎನ್ನುವುದು. ಅದು ಬೆಳಕಿನ ಬೆಳಕು. ಎಲ್ಲ ಹೊರಗಿನ ಬೆಳಕುಗಳೂ ನಂದಿಹೋದಾಗ ನಮ್ಮನ್ನು ನಡೆಸುವುದು ಈ ಅಂತರಂಗದ ಬೆಳಕು ಎಂದು ಯಾಜ್ಞವಲ್ಕ್ಯ ಹೇಳುತ್ತಾನೆ. ಆ ಬೆಳಕಿನಿಂದಲೇ ಬಾಹ್ಯವಾಗಿ ಎಲ್ಲ ಬೆಳಕನ್ನೂ ನೀಡುವ ವಸ್ತುಗಳೂ ತಮ್ಮ ಬೆಳಕನ್ನು ಪಡೆಯುತ್ತವೆ ಎಂದು ಮುಂಡಕ ಉಪನಿಷತ್ತು ಹೇಳುತ್ತದೆ. ಇದೇ ಮೂಲಭೂತವಾದ ಪ್ರಜ್ಞಾನತತ್ತ್ವ. ಬ್ರಹ್ಮಕ್ಕೆ ಹೇಳಿರುವ ಈ ವಿವರಣೆ ಆತ್ಮತತ್ತ್ವಕ್ಕೂ ಅನ್ವಯವಾಗುತ್ತದೆ.

ಭಾರತದ ಇತಿಹಾಸದಲ್ಲಿ ಮುಂದೆ ಬಂದ ತತ್ತ್ವಭೂಮಿಕೆಯಲ್ಲಿ, ಎಂದರೆ ವೈದಿಕ ಮತ್ತು ಅವೈದಿಕ ದರ್ಶನಗಳು ಹುಟ್ಟಿದಾಗ, ಆತ್ಮ ಬ್ರಹ್ಮಗಳಿಗೆ ಸಂಬಂಧಿಸಿದಂತೆ ಚಿತ್ ವಿಷಯಕವಾದ ಜಿಜ್ಞಾಸೆ ಎರಡು ರೀತಿಯಲ್ಲಿ ನಡೆದಿರುವುದನ್ನು ಕಾಣಬಹುದು. ಮೊದಲನೆಯದು ಬ್ರಹ್ಮ (ಅಥವಾ ಆತ್ಮ) ಸ್ವಭಾವಕ್ಕೇ ಸಂಬಂಧಿಸಿದಂತೆ ಎರಡನೆಯದು ಬ್ರಹ್ಮವನ್ನು ಅರಿಯುವುದಕ್ಕೆ ಸಂಬಂಧಿಸಿದಂತೆ. ಚಿತ್ ಮತ್ತು ಜ್ಞಾನ ಎಂಬುವನ್ನು ಪರ್ಯಾಯವಾಗಿ ತೆಗೆದುಕೊಂಡು, ಇವು ಆತ್ಮತತ್ತ್ವದ ಮೂಲಭೂತ, ಸ್ವಾಭಾವಿಕ ದ್ರವ್ಯರೂಪವೇ ಅಥವಾ ಆತ್ಮದ ವಿಶೇಷಣ ರೂಪವೆನ್ನಬಹುದಾದ ಗುಣವೆ ಅಥವಾ ಆತ್ಮದ ಕ್ರಿಯಾ ವ್ಯಾಪಾರವೆಂಬಂತೆ ಆಗಾಗ ಉಂಟಾಗುವ ಆಕಸ್ಮಿಕ ಅಥವಾ ಆಗಂತುಕ ಅಂಶವೇ ಅಥವಾ ನಿತ್ಯತತ್ತ್ವವಾದ ಆತ್ಮತತ್ತ್ವದಂತೆಯೇ ಇದೂ ನಿತ್ಯ ವಿಶೇಷವೇ ಅಥವಾ ಬಂದು ಹೋಗುವ ಅನಿತ್ಯ ಅಂಶವೇ ಆತ್ಮವನ್ನು ಅರಿಯುವ ವಿಷಯದಲ್ಲಿ ಜ್ಞಾತೃಸ್ಥಾನದಲ್ಲಿರುವುದನ್ನು ಜ್ಞೇಯವಾಗಿ ತಿಳಿದುಕೊಳ್ಳುವುದಾದರೂ ಹೇಗೆ-ಹೀಗೆ ನಾನಾ ಮುಖವಾಗಿ ಜಿಜ್ಞಾಸೆ ನಡೆಸಲಾಗಿದೆ.
ಚಾರ್ವಾಕರ ದೃಷ್ಟಿಯಲ್ಲಿ ಚಿತ್ ಅಥವಾ ಜ್ಞಾನವೆಂಬುದು ಭೌತಿಕ ದೇಹದಿಂದ ಉದ್ಭವವಾಗುವ ಒಂದು ಅಂಶ-ತಾಂಬೂಲಚರ್ವಣದಿಂದ ಕೆಂಪು ಹುಟ್ಟುವಂತೆ, ಕಬ್ಬಿನಲ್ಲಿ ಸಿಹಿ ಹುಟ್ಟುವಂತೆ. ದೇಹದ ಅಂತ್ಯವಾದರೆ ಅದೂ ಅಂತ್ಯವಾದಂತೆಯೇ.

	ಬೌದ್ಧರ ಅನಾತ್ಮವಾದದ ಪ್ರಕಾರ ಚಿತ್ ಅಥವಾ ಜ್ಞಾನವೆನ್ನುವುದು ಕ್ಷಣ ಕ್ಷಣಕ್ಕೂ ಬದಲಾಗುವ ಒಂದು ಪ್ರಕ್ರಿಯೆ. ಪಂಚಸ್ಕಂಧಗಳ ಸಂಘಾತದಿಂದ ಉಂಟಾದ ಒಂದು ವಿಜ್ಞಾನ ವೃತ್ತಿ. ಪರಮಾರ್ಥವಾಗಿ ಅದೂ ಇಲ್ಲವಾಗುತ್ತದೆ.

	ನೈಯ್ಯಾಯಿಕರು ಹೇಳುವಂತೆ ಜ್ಞಾನವೆಂಬುದು ಆಗಂತುಕವಾಗಿ ಆತ್ಮದಲ್ಲಿ ಉಂಟಾಗುವ ಒಂದು ಬೋಧ. ಆತ್ಮ, ಮನಸ್ಸು, ಇಂದ್ರಿಯ ಮತ್ತು ಇಂದ್ರಿಯಾರ್ಥ ಇವುಗಳ ಸನ್ನಿಕರ್ಷದಿಂದ ಉಂಟಾಗುವಂಥದು. ಈ ದೃಷ್ಟಿಯ ಪ್ರಕಾರ ಜ್ಞಾನವೆಂಬುದು ಆತ್ಮನ ಸ್ವಭಾವಲಕ್ಷಣವಲ್ಲ, ಅಲ್ಲದೆ ನಿತ್ಯವಾದುದೂ ಅಲ್ಲ. ಆತ್ಮನ ಇರವಿಗೂ ಅರಿವಿಗೂ ಅಗತ್ಯ ಸಂಬಂಧವೇನಿಲ್ಲ.

ಮೀಮಾಂಸಕರ ದೃಷ್ಟಿಯಲ್ಲಿ, ನ್ಯಾಯದಲ್ಲಿದ್ದಂತೆಯೇ ಆತ್ಮ ಪ್ರಥಮತಃ ಜಡನ್ಯಾಯದ ದೃಷ್ಟಿಯಲ್ಲಿ ಆತ್ಮ ಅರಿಯತ್ತಾನೆ ಎನ್ನುವುದು ಅನುವ್ಯವಸಾಯವನ್ನು ಹೊಂದಿಕೊಂಡಿದ್ದರೆ, ಮೀಮಾಂಸಕರಲ್ಲಿ ಅಂಥ ಎರಡನೆಯ ಅರಿವಿನ ಅಗತ್ಯಬೇಕಿಲ್ಲ. ಆದರೆ ಜ್ಞಾನ ಸ್ವಭಾವತಃ ಆತ್ಮನ ಗುಣವಲ್ಲದಿದ್ದರೂ ಜ್ಞಾನಕ್ರಿಯೆ ನಡೆದಾಗ ಅದೇ ಸಮಯದಲ್ಲಿ ಅದೇ ಕ್ರಿಯೆಯಿಂದ ವಸ್ತುವನ್ನು ಅರಿಯುವಂತೆ ಆತ್ಮ ತನ್ನನ್ನೂ ಅರಿತುಕೊಳ್ಳುತ್ತಾನೆ. ಅರಿಯುವಿಕೆ ಅಥವಾ ಜ್ಞಾನ ಆತ್ಮನ ಅಸ್ತಿತ್ವಕ್ಕೆ ಸಂಬಂಧಿಸಿದ್ದಲ್ಲ. ಪೂರ್ಣ ನಿದ್ದೆಯಲ್ಲಿ ತನ್ನ ಅರಿವು ಇಲ್ಲದಿರುವ ಕಾರಣ ಆತ್ಮ ಸ್ವಾಭಾವಿಕವಾಗಿ ಜಡ ಎಂದು ಮೀಮಾಂಸಕರ ವಾದ. ಹಾಗಾದರೆ ಆತ್ಮಕ್ಕೂ ಜ್ಞಾನಕ್ಕೂ ಸಂಬಂಧ ಹೇಗೆ ಎಂದರೆ, ಅದೊಂದು ಆತ್ಮನಲ್ಲಿ ಉಂಟಾಗುವ ಕ್ರಿಯೆ ಎನ್ನುತ್ತಾರೆ. ಇದನ್ನು ಜ್ಞಾನಕರ್ಮ ಎಂದು ಕರೆಯುತ್ತಾರೆ. ಇದು ಉಂಟಾದಾಗ ಆತ್ಮನನ್ನು ಜ್ಞಾತೃವೆಂದೂ ಅರಿತ ವಸ್ತುವನ್ನು ಜ್ಞೇಯವೆಂದೂ ತಿಳಿಯತಕ್ಕದ್ದು. ಆತ್ಮ ಕೂಡ ಜ್ಞೇಯವಸ್ತುವಾಗಬಹುದು ಎಂಬುದು ಮೀಮಾಂಸಕರ ನಿಲವು. ತನ್ನನ್ನು ತಾನು ಅರಿತುಕೊಳ್ಳುವುದು ಎನ್ನುವ ಮಾತಿನಲ್ಲಿ ಈ ಸತ್ಯ ಹೊರಬೀಳುತ್ತದೆ ಎನ್ನುತ್ತಾರೆ, ಮೀಮಾಂಸಕರು.

ಭಾರತೀಯ ದರ್ಶನಕಾರರಲ್ಲಿ ಆತ್ಮತತ್ತ್ವ ಚಿತ್ ಅಥವಾ ಜ್ಞಾನತತ್ತ್ವವೇ ಹೊರತು ಬೇರೆ ಬೇರೆಯಲ್ಲ ಎಂದು ಗಣಿಸಿದವರಲ್ಲಿ ಸಾಂಖ್ಯರು ಮೊದಲಿಗರು. ಇವರ ಪ್ರಕಾರ ಆತ್ಮ ಅಥವಾ ಪುರುಷ ಚಿದ್ವಸ್ತು ; ಪ್ರಕೃತಿ ಜಡಾತ್ಮಕ. ಪ್ರಕೃತಿಯ 'ವಿಕಾರ ವಾದ 'ಬುದ್ಧಿ ಎನ್ನುವುದು ಚಿತ್ಪುರುಷನನ್ನು ಪ್ರತಿಬಿಂಬಿಸುವ ಕರಣ ಮಾತ್ರ. ಪುರುಷನ ಪ್ರಕಾಶದಿಂದ ಹೊಳೆಯುವ ಬುದ್ಧಿ, ಅಹಂಕಾರ, ಮನಸ್ಸುಗಳು (ಅಂತಃಕರಣಗಳು) ಪ್ರಾಕೃತಿಕವೇ ಹೊರತು ಸ್ವತಃ ಪ್ರಕಾಶವನ್ನು ನೀಡುವಂತ ಚಿದ್ವಸ್ತುಗಳಲ್ಲ ಎನ್ನುತ್ತಾರೆ, ಸಾಂಖ್ಯರು. ಚಿತ್ ಅಥವಾ ಜ್ಞಾನ ಲಕ್ಷಣನಾದ ಪುರುಷ ನಿತ್ಯ, ಅನೇಕ. ಆದ್ದರಿಂದ ಚಿತ್ತತ್ತ್ವ ಕೂಡ ನಿತ್ಯ ಮತ್ತು ಅನೇಕ.
ವೇದಾಂತ ದರ್ಶನಗಳಲ್ಲಿ ಚಿತ್ತಿಗೂ ಆತ್ಮತತ್ತ್ವಕ್ಕೂ ಇರುವ ಸಂಬಂಧವನ್ನು ಹೀಗೆ ವಿವರಿಸಲಾಗಿದೆ:
ದ್ವೈತ ದರ್ಶನದಲ್ಲಿ ಆತ್ಮನಿಗೆ ಚಿತ್ತೆನ್ನುವುದು ಅಗತ್ಯವಾದ ಒಂದು ಗುಣ ; ಅಹಂಕಾರದೊಡನೆ ಸದಾ ಇರುವಂಥದು. ಆದರೆ ನ್ಯಾಯದರ್ಶನದಲ್ಲಿ ಹೇಳಿರುವಂತೆ ಆಗಂತುಕವಾಗಿ ಆತ್ಮನೊಡನೆ ಸೇರುವ ಗುಣವಲ್ಲ. ಅದು ಗುಣವಾದರೂ ಆತ್ಮನಂತೆಯೇ ನಿತ್ಯವಾದುದು. ಆದರೆ ಇದಕ್ಕೆ ಭಿನ್ನವಾದ ಮತ್ತೊಂದು ಚಿದ್ವ್ಯಾಪಾರವನ್ನೂ ದ್ವೈತ ಒಪ್ಪುತ್ತದೆ. ಸಾಂಖ್ಯ ಮತ್ತು ಅದ್ವೈತಗಳು ಹೇಳುವಂತೆಯೇ ವೃತ್ತಿಜ್ಞಾನವೆನ್ನುವುದೂ ಇದೆ. ಇದು ಬಾಹ್ಯವಸ್ತು ಮನಸ್ಸು ಮತ್ತು ಸಾಕ್ಷಿಗಳ ನಡುವೆ ಉಂಟಾಗುವ ಸಂಬಂಧದಿಂದ ಉದ್ಭವವಾದದ್ದು. ಆದ್ದರಿಂದ ಇದು ಅನಿತ್ಯ. ಆದ್ದರಿಂದ, ಆತ್ಮತತ್ತ್ವಕ್ಕೆ ಅಗತ್ಯವಾದದ್ದೇನಲ್ಲ. ಈ ವೃತ್ತಿಜ್ಞಾನ ಮಾನವನಿಗೆ ಸಂಬಂಧಿಸಿದ್ದಾದರೆ ಈಶ್ವರನಿಗೆ ಸಂಬಂಧಪಟ್ಟ ಜ್ಞಾನ ಬೇರೊಂದಿದೆ. ಅದು ಈಶ್ವರನಿಗೆ, ದೇಹದಂತೆ ಎಡ ಬಿಡದೆ, ಇರುತ್ತದೆ. ಇದರ ಸಂಬಂಧವಾಗಿ ಈಶ್ವರನಿಗೆ ಸದಾಕಾಲದಲ್ಲೂ ಸರ್ವ ವಿಷಯಗಳೂ ಜ್ಞೇಯ ವಸ್ತುಗಳಾಗಿ ಇರುತ್ತವೆ. ಈ ಜ್ಞಾನತತ್ತ್ವದ ಕಾರಣದಿಂದಲೇ ಈಶ್ವರನೂ ತನಗೆ ತಾನೇ ಜ್ಞಾತೃವಾಗಿರುವಂತೆ ಜ್ಞೇಯನೂ ಆಗಿರಲು ಸಾಧ್ಯ.
ವಿಶಿಷ್ಟಾದ್ವೈತ ದರ್ಶನದಲ್ಲಿ ಚಿತ್ ಅಥವಾ ಜ್ಞಾನವೆನ್ನುವುದು ಆತ್ಮನ ವಿಶೇಷಣ; ಆತ್ಮನಂತೆಯೇ ನಿತ್ಯ. ನಿತ್ಯ-ವಿಶೇಷ ಸಂಬಂಧದಿಂದಲೇ ಆತ್ಮನನ್ನು ಚಿದ್ರೂಪ ಅಥವಾ ಚೈತನ್ಯಗುಣಕ ಎಂದು ಕರೆದಿರುವುದು. ಆತ್ಮ ಕೇವಲ ಜ್ಞಾನವೊಂದೇ ಅಲ್ಲ, ಜ್ಞಾನದಿಂದ ಪ್ರಕಟವಾಗುವ ಜ್ಞೇಯಕೂಡ. ಭೂಮಿಗೂ ಭೂಮಿಯಿಂದ ಹೊರಡುವ ಗಂಧಕ್ಕೂ ವ್ಯತ್ಯಾಸವಿರುವಂತೆ ಆತ್ಮಕ್ಕೂ ಜ್ಞಾನಕ್ಕೂ ಭಿನ್ನತೆ ಇದೆ. ಆದರೆ ಜ್ಞಾನ ವಿಶೇಷಣವಾದ್ದರಿಂದ ವಿಶೇಷ್ಯವಾದ ಆತ್ಮನನ್ನು ಆಧರಿಸಿಕೊಂಡೇ ಇರುತ್ತದೆ. ಈ ದರ್ಶನದ ಪ್ರಕಾರ ಕೇವಲವಾದ ಜ್ಞಾನವೆನ್ನುವುದಿಲ್ಲ. ಅದು ಸದಾ ಅರ್ಥವಿಷಯಕ; ಜ್ಞಾತೃ-ಜ್ಞೇಯ ಸಂಬಂಧವನ್ನು ಸದಾಸೂಚಿಸುತ್ತದೆ. ಆತ್ಮನೊಡನೆ ನಿತ್ಯ ವಿಶೇಷವಾಗಿ ಜ್ಞಾನ ಇರುವುದರಿಂದ ಆತ್ಮನನ್ನು ಜಡವೆಂದು ಕರೆಯಲಾಗದು ಎಂದು ವಿಶಿಷ್ಟಾದ್ವೈತರ ನಿಲವು.

ಅದ್ವೈತದಲ್ಲಿಯಾದರೋ ಬ್ರಹ್ಮ ಅಥವಾ ಆತ್ಮ (ಈ ದರ್ಶನದಲ್ಲಿ ಇವೆರಡೂ ಪರ್ಯಾಯ ತತ್ತ್ವಗಳು) ಚಿತ್ತಲ್ಲದೆ ಬೇರೆಯಲ್ಲ. ಚಿತ್ ಅಥವಾ ಜ್ಞಾನ ಆತ್ಮದ ಸ್ವರೂಪ. ಅದು ನಿತ್ಯ, ಏಕ, ಅಖಂಡ, ನಿರ್ವಿಶೇಷ ಮತ್ತು ನಿರ್ವಿಷಯಕ. ಚಿತ್ ಸ್ವರೂಪವಾದ ಆತ್ಮ ಸ್ವಯಂಜ್ಯೋತಿ ಮತ್ತು ಸ್ವಪ್ರಕಾಶ. ಉಪನಿಷತ್ತುಗಳು ಹೇಳುವಂತೆ ಇದು ಮೂಲಭೂತವಾದ ಸತ್ಯ, ಜ್ಞಾನ, ಜ್ಞಾತೃಜ್ಞೇಯಗಳೆಂಬ ತ್ರಿಪುಟೀ ಸಂಬಂಧ ವ್ಯಾವಹಾರಿಕವಾದದ್ದು ; ಜೀವಾತ್ಮ ಕ್ಷೇತ್ರದಲ್ಲಿ ಪ್ರಯೋಗವಾಗುವಂಥದು. ಈ ಕ್ಷೇತ್ರದಲ್ಲಿ ಉಂಟಾಗುವ ಜ್ಞಾನ ಸ್ವರೂಪ ಜ್ಞಾನವಿಲ್ಲ. ಅದು ಅಂತಃಕರಣವೃತ್ತಿ ಅಥವಾ ಬುದ್ಧಿವೃತ್ತಿ. ಪಾರಮಾರ್ಥಿಕ ಜ್ಞಾನ ಸ್ವರೂಪಸಿದ್ಧವಾದದ್ದು. ಆತ್ಮನಿಗೆ ಅಪರೋಕ್ಷವಾದದ್ದು ಮತ್ತು ನಿರಪೇಕ್ಷವಾದದ್ದು. ಆದ್ದರಿಂದ ಆತ್ಮ ಆತ್ಮಕ್ಕೆ ಜ್ಞೇಯ ವಸ್ತುವಾಗುವ ಆವಶ್ಯಕತೆ ಇಲ್ಲ. ಸತ್ ಒಂದೇ ಆದ್ದರಿಂದ ಸದ್ವಸ್ತುವಾದ ಆತ್ಮ ಅಖಂಡವಾದದ್ದು. ಆದ್ದರಿಂದ ಒಂದು ಇನ್ನೊಂದನ್ನು ಅರಿಯುವುದಿಲ್ಲ. ಏಕೆಂದರೆ ಎರಡನೆಯದೇ ಇರುವುದಿಲ್ಲ.

ಚಿತ್ತಿನ ವಿಚಾರವಾಗಿ ನಡೆದಿರುವ ಜಿಜ್ಞಾಸೆಯನ್ನು ಸಮಗ್ರ ದೃಷ್ಟಿಯಿಂದ ನೋಡಿದಲ್ಲಿ ಮುಖ್ಯವಾದ ಪ್ರಶ್ನೆ ಹೀಗಿರುತ್ತದೆ: ಜ್ಞಾನದ ಪರಿಮಿತಿಗೆ ಜ್ಞೇಯವಸ್ತು ಸಿಗುವ ಹಾಗೆ, ಅದೇ ಜ್ಞಾನವೂ ಸಿಗುತ್ತದೆಯೇ? ಎಂದರೆ ಜ್ಞಾನ ಜ್ಞೇಯವಾಗಬಲ್ಲುದೇ ? ಈ ಪ್ರಶ್ನೆಗೆ ಮೂರು ತೆರನಾದ ಸಮಾಧಾನ ಹೇಳಬಹುದು; ಹೇಳಿರುವುದು ಕಂಡು ಬರುತ್ತದೆ. 1. ಒಂದು ವಸ್ತುವನ್ನು ನಾವು ಅರಿತೆವೆಂದಾಗ, ಈ ಅರಿವಿನ ಜ್ಞಾನದಿಂದ ನಮಗೆ ಇರುವುದಿಲ್ಲ. 2. ಈ ಅರಿವಿನ ಜ್ಞಾನ ಮತ್ತೊಂದು ಜ್ಞಾನದಿಂದ ನಮಗೆ ಸಿಗುತ್ತದೆ. 3. ಈ ಅರಿವಿನ ಜ್ಞಾನ ತತ್ ಕ್ಷಣ, ಪರೋಕ್ಷವಾಗಿ ಯಾವ ಮಾಧ್ಯಮದ ಉಪಯೋಗವೂ ಇಲ್ಲದೆ ಆಗುತ್ತದೆ.
ಮೊದಲ ಉತ್ತರ ಸರಿಯಾದಲ್ಲಿ, ಒಂದು ಅಸಂಗತ ಅಥವಾ ಆಯುಕ್ತವಾದ ಸನ್ನಿವೇಶದಲ್ಲಿ ನಾವು ಸಿಲುಕಿದಂತಾಗುತ್ತದೆ. ಅದೇನೆಂದರೆ ನಮ್ಮ ಅರಿವಿಗೆ ಸಿಗದ ಜ್ಞಾನ, ಎಲ್ಲ ವಸ್ತುಗಳನ್ನೂ ಪ್ರಕಾಶಿಸುತ್ತದೆ, ಅರಿಯುತ್ತದೆ ಎಂದ ಹಾಗಾಯಿತು. ಎರಡನೆಯದು ನಿಜವಾದಲ್ಲಿ, ಎರಡನೆಯ ಜ್ಞಾನವನ್ನು ಅರಿಯಲು ಮತ್ತೊಂದು ಜ್ಞಾನ, ಅದನ್ನು ಅರಿಯಲು ಮಗದೊಂದು ಜ್ಞಾನ ಹೀಗೆ ಅನವಸ್ಥಾದೋಷಕ್ಕೆ ಸಿಗುತ್ತೇವೆ. ಈ ಎರಡು ದೋಷಗಳನ್ನು ಪರಿಹರಿಸಬೇಕಾದರೆ ಮೂರನೆಯ ನಿಲುವು ಅಗತ್ಯವಾಗುತ್ತದೆ.
ವಸ್ತುವನ್ನು ಪ್ರಕಾಶಿಸಿ ಪ್ರಕಟಗೊಳಿಸುವಂಥ ಜ್ಞಾನ, ತನ್ನ ಪ್ರಕಟಣೆಗೆ ಮತ್ತೊಂದು ಜ್ಞಾನವನ್ನು ಕಾಯಬೇಕು ಎನ್ನುವಂತಾದರೆ ಅದು ಮೂಲಭೂತವಾಗಿ ಜಡವೇ ಆಗಿರಬೇಕು. ಅಂದರೆ ಅದು ಪರಪ್ರಕಾಶ್ಯವಾಗಿರುತ್ತದೆ, ಸ್ವಪ್ರಕಾಶವಲ್ಲ. ಇದು ಸತ್ಯವಾದಲ್ಲಿ ಆತ್ಮತತ್ತ್ವವನ್ನು ಕತ್ತಲಿನ ಮೂಟೆ ಎಂದ ಹಾಗಾಯಿತು. ಈ ನಿಲುವಿನಿಂದ ಆತ್ಮತತ್ತ್ವದ ಪಾರಮ್ಯವನ್ನೇ ನಿರಾಕರಿಸಿದಂತಾಗುತ್ತದೆ. ಆತ್ಮವನ್ನು ತೋರಿಸುವ ಬೆಳಕಿಗಾಗಿ ಆತ್ಮದ ಎಲ್ಲೆಯಿಂದ ಆಚೆಯೇ ಹುಡುಕುವಂತಾಗುತ್ತದೆ. ಈ ಹುಡುಕುವಿಕೆಗೆ ಅಂತ್ಯವೇ ಇಲ್ಲವೆಂದಾಗುತ್ತದೆ. ಇದರಲ್ಲಿ ಮತ್ತೊಂದು ಸಂದಿಗ್ಧ ಕಂಡುಬರುತ್ತದೆ : ತನ್ನನ್ನು ಪ್ರಕಟಗೊಳಿಸಿಕೊಳ್ಳಲು ಅಸಮರ್ಥವಾದ ಆತ್ಮ ಜಗತ್ತನ್ನು ತೋರಿಸುವುದಾದರೂ ಹೇಗೆ? ಎಂದರೆ ಅದು ಜಡವೇ ಎಂದಾಗುತ್ತದೆ. ಆತ್ಮ ಜಡವಾದಲ್ಲಿ ಬೇರೆಯದನ್ನು ಅರಿಯುವುದಂತಿರಲಿ, ತನ್ನ ಅಸ್ತಿತ್ವವನ್ನೇ ಸಿದ್ಧಪಡಿಸಲಾರದಾಗುತ್ತದೆ. ಎಂದರೆ ತನ್ನ ಇರವನ್ನೇ ಅರಿಯದಂತಾಗುತ್ತದೆ. ಆದ್ದರಿಂದ ಒಂದು ದೀಪ ತನ್ನನ್ನು ತಾನು ತೋರಿಸಿಕೊಂಡು ಇತರ ವಸ್ತುಗಳನ್ನು ಬೆಳಗುವಂತೆ - ಯಾವ ಮಾಧಮ್ಯವನ್ನೂ ಅಪೇಕ್ಷಿಸದೆ-ಸ್ವಭಾವಸಿದ್ಧವಾಗಿ, ಸ್ವಪ್ರಕಾಶವಾಗಿ ಅಪರೋಕ್ಷವಾಗಿ ಆತ್ಮ ಅಸ್ತಿ ಭಾತಿ ಎನ್ನುವ ಎರಡು ಲಕ್ಷಣಗಳನ್ನೂ ಏಕಕಾಲದಲ್ಲಿ ಪ್ರಕಟಗೊಳಿಸುತ್ತದೆ. ಅದು ಬಾಹ್ಯ ಮತ್ತು ಜಡ ವಸ್ತುವಿನ ರೀತಿಯಲ್ಲಿ ಜ್ಞಾನಕ್ಕೆ ವಿಷಯವಾಗುವ ಅಂಶವೂ ಅಲ್ಲ. ಮತ್ತೊಂದು ಜ್ಞಾನಕ್ಕೆ ವಿಷಯವಾಗುವುದೂ ಅಲ್ಲ. ಅದು ಸ್ವವೇದ್ಯ. ಸ್ವಪ್ರಕಾಶ, ನಿರಂತರ, ನಿತ್ಯಸಿದ್ಧ, ಮತ್ತು ಅಖಂಡ.
ಈ ಉತ್ತರ ಉಪನಿಷತ್ತಿನ ರೀತಿಯಲ್ಲಿ ಆತ್ಮದ ಪರಮಾರ್ಥ ಸ್ವರೂಪವಾದ ಚಿತ್ತಿನ ಸ್ವಭಾವವನ್ನು ನೀಡುತ್ತದೆ.
(ನೋಡಿ— ಆತ್ಮ)									(ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ